ದೊಡ್ಡ ರೋಗ -
ದನ ಮತ್ತಿತರ ಮೆಲುಕು ಹಾಕುವ ಪ್ರಾಣಿಗಳಿಗೆ ತಗಲುವ ಮಾರಕ ಅಂಟುಜಾಡ್ಯ (ರಿಂಡರ್ ಪೆಸ್ಟ) ಹಂದಿಗಳೂ ಇದಕ್ಕೆ ತುತ್ತಾಗುವುದುಂಟು. ಕುದುರೆ ಮತ್ತು ಮಾಂಸಾಹಾರಿ ಸಸ್ತನಿಗಳು ಮಾತ್ರ ಈಡಾಗವು. ಭಾರತದ ಮತ್ತು ಏಷ್ಯ ಹಾಗೂ ಆಫ್ರಿಕಗಳ ಕೆಲವು ಭಾಗಗಳಿಗೆ ಸೀಮಿತವಾಗಿರುವ ಈ ರೋಗ 18 ನೆಯ ಶತಮಾನದಿಂದ ಪರಿಚಿತವಾಗಿದೆ. ರೋಗ ಉಂಟಾಗುವುದು ಒಂದು ತೆರನ ವೈರಸ್‍ನಿಂದ. ರೋಗಪೀಡಿತ ಪ್ರಾಣಿಗಳ ಬಾಯಿ, ನಾಸಿಕ, ಕಣ್ಣುಗಳಿಂದ ಒಸರುವ ರಸ ಹಾಗೂ ಸಗಣಿಯ ಮೂಲಕ ಹರಡುತ್ತದೆ. ತೀವ್ರ ಜ್ವರ (1040-1050 ಈ) ಕೆಂಪಡರಿದ ಕಣ್ಣುಗಳು, ಬಾಯಿ, ನಾಸಿಕ, ಕಣ್ಣುಗಳಿಂದ ಕೀವು ಸುರುಯುವುದು. ಬಾಯಲ್ಲಿ ಸಣ್ಣ ಗಾತ್ರದ ವ್ರಣಗಳೇಳುವುದು-ಇವು ರೋಗದ ಮುಖ್ಯ ಲಕ್ಷಣಗಳು. ಜ್ವರ ಆರಂಭವಾದ 4-5 ದಿವಸಗಳಲ್ಲಿ ರಕ್ತಭೇದಿಯುಂಟಾಗತೊಡಗುತ್ತದೆ. ಸಗಣಿಗೆ ದುರ್ವಾಸನೆ ಇರುವುದು ಇನ್ನೂಂದು ಲಕ್ಷಣ. ರೋಗ ಹೊರಹೊಮ್ಮುವುದಕ್ಕೆ ಬೇಕಾಗುವ ಕಾಲ 8-9 ದಿವಸಗಳು. ಹೊಮ್ಮಿದ ಅನಂತರ ಪ್ರಾಣಿ ಸುಮಾರು 1 ವಾರ ಕಾಲ ರೋಗಪೀಡಿತವಾಗಿದ್ದು ಸಾವಿಗೀಡಾಗುತ್ತದೆ. ಕೆಲವೊಮ್ಮೆ ರೋಗದ ತೀವ್ರತೆ ವಿಪರೀತ ಹೆಚ್ಚಾಗಿದ್ದು 2-3 ದಿವಸಗಳಲ್ಲೇ ಪ್ರಾಣಿ ಸತ್ತುಹೋಗಬಹುದು. ಭಾರತದ ಸ್ಥಳೀಯ ತಳಿಗಳು ರೋಗಕ್ಕೆ ನಿರೋಧವನ್ನು ಪಡೆದಿವೆಯಾಗಿ ರೋಗದ ಅವಧಿ 2-3 ವಾರಗಳ ಕಾಲ ಮುಂದುವರಿಯಬಹುದು. ರೋಗಪೀಡಿತ ಪ್ರಾಣಿ ತುಂಬ ಕೃಶವಾಗುತ್ತದೆ. ಅದರ ನಾಲ್ಕನೆಯ ಜಠರ ಭಾಗ (ಅಬೊಮೆಸಮ್), ದೊಡ್ಡ ಕರುಳಿನ ಅಂಧಾಂತ್ರ (ಸೀಕಮ್) ಮತ್ತು ಗುದನಾಳಗಳು (ರೆಕ್ಟಮ್) ತೀವ್ರ ರಕ್ತಸಂಚಯಕ್ಕೆ ಒಳಗಾಗುವುವಲ್ಲದೆ, ಕರುಳಿನ ಊತ ಹಾಗೂ ಬಾಯಿ ಮತ್ತು ಗಂಟಲ ಕುಹರದ ಲೋಳೆ ಪೊರೆಯ ಮೇಲೆ ಕೆಂಪು ಮತ್ತು ಬೂದಿ ಬಣ್ಣದ ಕಲೆಗಳು ಉಂಟಾಗುವುವು. ರೋಗಪೀಡಿತ ಪ್ರಾಣಿಗಳು ಸಾವಿಗೀಡಾಗುವುದೇ ಸಾಮಾನ್ಯ. ಒಂದು ವೇಳೆ ಸತ್ತು ಹೋಗದೆ ಉಳಿದರೆ ಅಂಥ ಪ್ರಾಣಿ ತನ್ನ ಜೀವಮಾನದುದ್ದಕ್ಕೂ ರೋಗಕ್ಕೆ ನಿರೋಧತೆಯನ್ನು ಪಡೆದುಕೊಳ್ಳುತ್ತದೆ.  

	ದೊಡ್ಡ ರೋಗದ ವೈರಸ್ಸನ್ನು ಮೇಕೆ, ಮೊಲ ಮತ್ತು ಕೋಳಿ ಭ್ರೂಣಗಳಿಗೆ ಊಡಿಸಿದಾಗ ಅದು ಸೌಮ್ಯ ರೂಪವನ್ನು ತಳೆಯುತ್ತದಲ್ಲದೆ ಅಂಥ ಪ್ರಾಣಿಗಳ ಅಂಗಾಂಶಗಳಲ್ಲಿ ರೋಗನಿರೋಧಕ ಲಸಿಕೆ (ವ್ಯಾಕ್ಸಿನ್) ಉತ್ಪತ್ತಿಯಾಗುತ್ತದೆ. ಇಂಥ ಲಸಿಕೆಯನ್ನು ಆರೋಗ್ಯವಂತ ಪ್ರಾಣಿಗಳಿಗೆ ಕೊಡುವುದರಿಂದ ಅವುಗಳಲ್ಲಿ ರೋಗನಿರೋಧ ಸಾಮಥ್ರ್ಯವನ್ನು ಬೆಳೆಸಬಹುದು. ಅಲ್ಲದೆ ಈ ರೋಗದ ಚಿಕಿತ್ಸೆಗೆ ಬಳಸಲಾಗುವ ಪ್ರತಿವಸೆಯನ್ನೂ (ಆ್ಯಂಟಿಸೀರಮ್) ತಯಾರಿಸಲಾಗಿದೆ.
(ಎಸ್.ಎಂ ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ